ಆತ್ಮೀಯ ಓದುಗ,
೨೧ನೇ ಶತಮಾನ ಜಾಗತೀಕರಣ ಮತ್ತು ತಂತ್ರಜ಼್ಞಾನದ ಯುಗ. ಇದರ ಪ್ರಮುಖಸಾಧನಗಳು ಸಾಮಾಜಿಕ ಜಾಲತಾಣಗಳು--ಫ಼ೇಸ್ಬುಕ್, ಟ್ವಿಟರ್, ಇಂಸ್ಟಾಗ್ರಾಂ, ಮತ್ತುವಾಟ್ಸಾಪ್. ಇವು ವ್ಯಕ್ತಿಯ ಸಾಮಾಜಿಕ ಸಂಬಂಧಗಳ ವ್ಯಾಪ್ತಿಯನ್ನು ಈ ವೇಗದ ಶತಮಾನಕ್ಕೆ ತಕ್ಕಂತೆ ವಿಸ್ತರಿಸಿದೆ. ಇದಕ್ಕೆ ಯಾರೂ ಹೊರತಾಗಿಲ್ಲ. ಆಸ್ಟ್ರೇಲಿಯಾ ವಿರುದ್ದ ಸೋತಿದ್ದೇ ಸಾಕು--ವಿರಾಟ್ ಕೋಹ್ಲಿಯ ಪರ-ವಿರುದ್ದ ಮೀಮ್ಸ್ ಗಳು ಸಾಲಾಗಿ ಅಂತರ್ಜಾಲದಲ್ಲಿ ಹರಿದಾಡಲು ಶುರು. ಒಂದೇ ಸಂತಸ ಎಂದರೆ, ಇದು ವೈಯುಕ್ತಿಕ ಸಂಬಂಧಗಳನ್ನು ಬಿಟ್ಟು, ಕೋಹ್ಲಿಯ ವೃತ್ತಿಪರತೆಯ ಬಗ್ಗೆ ಆಗಿರುವುದು. ಕೆಲವು ಮೀಮ್ಸ್ ಗಳನ್ನು ತಮಾಷೆಗಾಗಿ ಎಂದಿಟ್ಟುಕೊಂಡರೂ, ಕೆಲವು ಮೀಮ್ಸ್ ಗಳು ಆತ್ಮಸ್ಥೈರ್ಯವನ್ನು ಹಲವು ನಿಮಿಷಗಳಿಗಾದರೂ ಕೆಡಿಸುವುದು ಸತ್ಯ. ಈ ಥರಹದ ’ಟ್ರೋಲಿಂಗ್’ ಮಾಡುವ ಹಾನಿ ’ಗಾಸಿಪ್’ಗಿಂತ ಕಡಿಮೆ ಏನಿಲ್ಲ.
ವಿಚಿತ್ರ ಎಂದರೆ ತಂತ್ರಜ಼್ಞಾನದ ಈ ಶತಮಾನದಲ್ಲಿ ಸಾಮಾಜಿಕಜಾಲತಾಣಗಳು ಶುರುವಾದ ಒಂದು ಕಾರಣ, ವಿತ್ತೀಯ ಪ್ರಯೋಜನಗಳ ಹೊರತಾಗಿ, ಸಾಮಾಜಿಕ ಸಂಬಂಧಗಳನ್ನು ಬೆಳೆಸಿ-ಉಳಿಸಿಕೊಳ್ಳಲು. ಸಮಾಜಶಾಸ್ತ್ರ ಮಾನವನನ್ನು ಇಂದಿಗೂ ’ಸಾಮಾಜಿಕಪ್ರಾಣಿ’ಎಂದೇ ಗುರುತಿಸುತ್ತದೆ. ಅಂದರೆ, ಒಬ್ಬ ವ್ಯಕ್ತಿ, ಸಂಬಂಧಗಳನ್ನು ಕೌಟುಂಬಿಕ ಸಂಬಂಧಗಳಿಗೆ ಮಾತ್ರ ಸೀಮಿತಗೊಳಿಸದೆ, ಸಾಮಾಜಿಕ ಸಂಬಂಧಗಳನ್ನು ಬೆಳೆಸಿ, ನಿರ್ವಹಿಸುವುದು ಸ್ವ-ಇಚೆ,ಆದ್ಯತೆಗಳ ಜೊತೆ ಒಂದು ಹಂಬಲ ಸಹ ಎಂಬರ್ಥದಿಂದ. ಈ ಹಂಬಲ ಮಾನವ ಸಮಾಜದ ಸಾಮಾಜಿಕ ಸಂಬಂಧಗಳ ಇತಿಹಾಸದ ಮೂಲ. 21ನೇ ಶತಮಾನದಲ್ಲಿ ಈ ಹಂಬಲದ ಪ್ರಮುಖ ಅಭಿವ್ಯಕ್ತಿಯಾಗುವುದು ತಾಂತ್ರಿಕತೆಯ ಮೂಲದ ಸಾಮಾಜಿಕ ಜಾಲತಾಣಗಳು. ಇದು ವಿಶ್ವದ ಜೊತೆ ವ್ಯಕ್ತಿಯ ಬಾಂಧವ್ಯದ ಒಂದು ಗುರುತು.ನಾವು ಇದನ್ನು ವದಂತಿಗಳನ್ನು ಹಬ್ಬಿಸಲು, ನಮಗೆ ಇಷ್ಟವಾಗದವರನ್ನುಅಥವಾ ಇಷ್ಟವಾಗದ ಸತ್ಯಗಳನ್ನು ಅಲ್ಲಗಳೆಯಲು ಬಳಸುತ್ತಿರುವುದು ನಮ್ಮ ಪ್ರಗತಿಪರತೆಯನ್ನು ಬಿಟ್ಟು, ಅದನ್ನು ಹಿನ್ನೆಡಿಸುವಲ್ಲಿ ನಾವೇ ಮುಂಚೂಣಿ ಹಿಡಿದಿರುವುದು ಈ ದಿನದ ವಿಪರ್ಯಾಸ.
ಸಮುದಾಯ ಜೀವನ ನಡೆಸಲು ವ್ಯಕ್ತಿ-ಸಮಾಜದ ನಡುವಣ ವಿಸ್ತರಿಸುವ ಸಂಬಂಧಗಳ ಬಗೆಗೆ ಮನುಷ್ಯನ ಮನಸ್ಸು ಎಷ್ಟು ಹಾತೊರೆಯುತ್ತದೆಯೋ, ಅಷ್ಟೇ ಸಮನಾಗಿ ಅಥವಾ ಕೆಲವು ಬಾರಿ ಎಲ್ಲವನ್ನೂ ಮೀರಿಸುವ ಆತುರ, ಸೆಳೆತ ಅಧಿಕಾರದ ಸೆಳೆತ. ಇತಿಹಾಸ ಈ ಸೆಳೆತ ಅನೇಕ ಬಾರಿ ನಿರಂಕುಶಾಧಿಪತ್ಯದ ವಿಷವರ್ತುಲದ ನಿರಂತರತೆಯನ್ನು ಸೃಷ್ಟಿಸಿರುವುದನ್ನು ಸಾಕಷ್ಟು ಪುರಾವೆಗಳನ್ನು ಕೊಟ್ಟಿದೆ. ಹಿಟ್ಲರ್, ಸ್ಟಾಲಿನ್ ಮುಂತಾದವರನ್ನು ಈ ಸಾಲಿನಲ್ಲಿ ಪ್ರಮುಖರನ್ನಾಗಿಸಿದರೆ, ಇನ್ನೊಂದೆಡೆ ಜನಾಂಗೀಯ ನಿಂದನೆ, ವರ್ಣಬೇಧ ನೀತಿಯ ಮೂಲಕ ವಸಾಹತುಶಾಹಿಗಳನ್ನು ಈ ವರ್ತುಲದಲ್ಲಿ ಮುಖ್ಯರನ್ನಾಗಿ ನಿಲ್ಲಿಸುತ್ತದೆ. ಮಹಿಳಾವಾದ ಪಿತ್ರು ಪ್ರಧಾನ ಸಮಾಜದಡಿಯಲ್ಲಿ ಪುರುಷ, ನಂತರದಲ್ಲಿ ಸ್ತ್ರೀಯರನ್ನೂ, ಈ ವಿಷವರ್ತುಲದಲ್ಲಿ ಗುರುತಿಸಿತು. 20ನೇ ಶತಮಾನದಲ್ಲಿ ಅಧಿಕಾರಶಾಹಿ ಆಡಳಿತ ಮಾದರಿಗಳು ಉಳಿಯಲು ಮತ್ತೊಂದು ಕಾರಣ ಗುಂಪುಗಾರಿಕೆ.
ಸಮಾಜಶಾಸ್ತ್ರ ವ್ಯಕ್ತಿ ಹಾಗೂ ಸಮಾಜದ ಅಧ್ಯಯನದಲ್ಲಿ, ಗುಂಪುಗಾರಿಕೆಯನ್ನು ಸಕಾರಾತ್ಮಕ ಗುಣವಾಗಿ ಪರಿಗಣಿಸುವುದಿಲ್ಲ. ಇದನ್ನು ಸಮಾಜಮುಖಿ ಎಂದು ಒಪ್ಪುವುದಿಲ್ಲ; ಬದಲಾಗಿ, ಸಮಾಜಘಾತುಕ ಎಂದೇ ಸಮಾಜಶಾಸ್ತ್ರಜ್ಞ ಮತ್ತು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಈ ಥರಹದ ಒಂದು ಗುಂಪಿಗೆ ಸೇರಲು, ವ್ಯಕ್ತಿಯ ಸ್ವಂತಿಕೆಗೆ ಬದಲಾಗಿ, ಗುಂಪಿನ ಎಲ್ಲಾ ನಡಾವಳಿಗಳನ್ನು ಒಪ್ಪಬೇಕಾಗುತ್ತದೆ. ಇದು ಅವಿಶ್ವಾಸನ್ನು ಹುಟ್ಟಿಹಾಕುತ್ತದೆ ಮತ್ತು ಯಾವುದು ಈ ಗುಂಪಿನ ಉಳಿವಿಗೆ ಸಹಾಯಕವಾಗಿಲ್ಲವೋ, ಅದೆಲ್ಲವನ್ನು ತಪ್ಪು ಎಂದೇ ಪರಿಗನೆಸುತ್ತದೆ. ಇದು ಅನುಕೂಲವಾದ ಮತ್ತು ಅನಗತ್ಯವಾಗಿ ಸಾಂಪ್ರದಾಯಿಕತೆಯನ್ನು ಅಲ್ಪವಾಗಿಸಿ, ಊರ್ಜಿತಗೊಳಿಸುತ್ತದೆ್. ಇಂತಹ ಸಂದರ್ಭದಲ್ಲಿ ವದಂತಿಗಳು ಉಪಯುಕ್ತ ಸಾಧನ. ಈ ಅಧಿಕಾರಶಾಹಿಗಳನ್ನು ನಿರೂಪಿಸಿ ನಿರ್ವಹಿಸುವಲ್ಲಿ, ಹಿಟ್ಲರನ ಆಧಿಪತ್ಯದ ’ಒಂದು ಸುಳ್ಳನ್ನು ಅನೇಕ ಬಾರಿ ಹೇಳಿದರೆ, ಅದು ಸತ್ಯವಾಗುವುದು’ಎನ್ನುವ ವದಂತಿಯ ಪಾತ್ರ ಬಹು ಮುಖ್ಯ. ಇದು ವದಂತಿಯ ಕ್ರೂರ ರೂಪದ ಪರಿಚಯ ಮತ್ತು ಪರಿವಿಡಿ ಕೂಡ.
ಹಾಗೆ,ಈ ತಂತ್ರಜ಼್ಞಾನ ಯುಗದ ನಿರಂಕುಶಾಧಿಕಾರಿ ಸಾಮಾಜಿಕಜಾಲತಾಣದ ಗಾಸಿಪ್. ಗಾಸಿಪ್ ಅಥವಾ ಕಾಡು ಹರಟೆ ನಮಗೆ ಹೊಸತೇನಲ್ಲ. ಭಾರತದ ವಿನೋದಾವಳಿಗಳಲ್ಲಿ ಪ್ರಮುಖ ಪಾತ್ರ ಹರಟೆ ಮತ್ತು ಹರಟೆಕಟ್ಟೆಯದು. ಮನೆಯ ಮುಂದಿನ ಪುರುಷರ ಜಗಲೀಕಟ್ಟೆ, ಹೆಂಗಸರ ನೆಚ್ಚಿನ ಹಿತ್ತಿಲಿನಿಂದ ಮೊದಲುಗೊಂಡದ್ದು ಹರಟೆ. ಹರಟೆ ’ತೋಳ ಬಂತು ತೋಳ’ಎಂಬ ವದಂತಿಯನ್ನು ಹಬ್ಬಿಸುವಲ್ಲಿ ದೊಡ್ಡ ಪಾತ್ರವಹಿಸಿದ್ದರೂ, ಇದಕ್ಕೆ ಕ್ರಿಯಾತ್ಮಕ ಮುಖ ಇರುವುದು ಮರತೇಬಿಟ್ಟಿದ್ದೇವೆ. ಅನೇಕ ಜಾನಪದಕಥೆಗಳು, ಹಾಡುಗಳು ಹರಟೆಯಲ್ಲಿ ಶುರುವಾಗಿ ಕಥೆಗಳಾಗಿದ್ದನ್ನು ಜಾನಪದತಜ್ಞರು ದಾಖಲಿಸಿದ್ದಾರೆ. ದೂರದರ್ಶನವೂ ಇದಕ್ಕೆ ಹೊರತಲ್ಲ. ಹರಟೆಯನ್ನು ’ಹರಟೆಕಟ್ಟೆ’ ನಾಮದಡಿಯಲ್ಲಿ ಸಾಹಿತ್ಯ ಮತ್ತು ಇತರೆ ವಿಷಯಗಳ ಬಗೆಗೆ ಹಾಸ್ಯಪ್ರಧಾನ ಕಾರ್ಯಕ್ರಮವಾಗಿಸಿದ್ದುಅ. ರಾ. ಮಿತ್ರ ಮತ್ತು ಹಿರೇಮಗಳೂರ ಕಣ್ಣನ್.
ಹೀಗೆ, ಹರಟೆ ಗಂಭೀರ ವಿಷಯಗಳನ್ನೊಳಗೊಂಡು,ಹಾಸ್ಯದ ಮೂಲಕ ಗಂಭೀರ ವಿಷಯಗಳ ಚರ್ಚೆಗೊಳಪಡಿಸುವುದು ಒಂದು ಮುಖವಾದರೆ, ನಕಾರಾತ್ಮಕವಾದ ವದಂತಿಯನ್ನು ಹರಡುವುದು ಇದರ ಮತ್ತೊಂದು ಪಕ್ಕ. ಫ಼ೇಸ್ಬುಕ್, ಟ್ವಿಟರ್, ಇಂಸ್ಟಾಗ್ರಾಂ, ಮತ್ತು ವಾಟ್ಸಾಪ್, ಸುದ್ದಿವಾಹಿನಿಗಳೂ ವದಂತಿಗಳನ್ನು ಹುಟ್ಟು ಹಾಕುವಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರ ಗಮನಕ್ಕೆ ಬಂದಿರುವುದು ನಿಜ. ಇದು ಇತಿಹಾಸದಲ್ಲಿ ಹೊಸತೇನಲ್ಲದಿದ್ದರೂ, ಆತಂಕ ಸ್ರುಷ್ಟಿ ಮಾಡುವುದರಲ್ಲಿ ಯಶಸ್ವಿಯಾಗಿರುವುದು ಅಂತೆ-ಕಂತೆಗಳನ್ನು ನಿಜವಾಗಿಸಿರುವುದ ರಲ್ಲಿ ಎರಡು ಮಾತಿಲ್ಲ. ಪ್ರಶ್ನೆ ಬರುವುದು ಇದರ ಹಿಂದಿನ ಉದ್ದೇಶ ಮತ್ತು ಮಾನಸಿಕತೆಯ ಬಗ್ಗೆ. ಸುಳ್ಳು ಸುದ್ದಿ ಮತ್ತು ವಾಟ್ಸಾಪ್ಮೆಸೇಜುಗಳು ಈ ವದಂತಿಗಳನ್ನು ಹಬ್ಬಿಸುವಲ್ಲಿ ಯಶಸ್ವಿಯಾಗುವುದರ ಹಿಂದಿರುವುದು ಇವು ಗುಂಪುಗಳನ್ನು ನಿರ್ಮಾಣ ಮಾಡುವಲ್ಲಿ ಅಥವಾ ಇರುವ ಗುಂಪಿನ ಅಭದ್ರತೆಗಳನ್ನು ಸಾಮಾಜಿಕ ಅಸಮಾನತೆಯಾಗಿ ಬಿಂಬಿಸುವುದರ ಮೂಲಕವಾಗಿ ಮತ್ತು ಗುಂಪನ್ನು ಈ ಮೂಲಕ ಯಶಸ್ಸಿನತ್ತ ಒಯ್ಯಬಹುದು ಎಂಬ ಭ್ರಮೆಯನ್ನು ರಚಿಸುವುದರ ಮೂಲಕವಾಗಿ. ಈ ಗುಂಪುಗಳು ಒಪ್ಪಿದ್ಡೇ ಸತ್ಯ ಎನ್ನುವ ಮನೋಭಾವ ಪ್ರಬಲವಾಗಿಸುವುದು. ಇದು ರಾಜಕೀಯ ಅರಾಜಕತೆಯನ್ನುನಿರ್ಮಿಸುತ್ತದೆ. ಸಾಮಾಜಿಕ ಅಭದ್ರತೆ ಹಾಗೂ ಅವಿಶ್ವಾಸದ ಪರಿಸರಸೃಷ್ಟಿಸುವುದು ಪೂರ್ವಾಗ್ರಹಗಳನ್ನು ಸತ್ಯವನ್ನಾಗಿಸುವತ್ತ ಒಂದು ಹೆಜ್ಜೆ. ಈ ಸತ್ಯಗಳನ್ನಾಗಿಸುವ ಪ್ರಕ್ರಿಯೆಗಳನ್ನು ಸಕಾರಾತ್ಮಕವಾಗಿ, ದಿಟ್ಟವಾಗಿ, ನೇರವಾಗಿ ಎದುರಿಸುವುದು. ಹೀಗಾದಾಗ ಈ ಗಾಸಿಪ್ ತೋಳಗಳನ್ನು ಓಡಿಸುವತ್ತ ಒಂದು ಹೆಜ್ಜೆಇಡಬಹುದು. . .